Wednesday, April 16, 2008

ಐನ್ ಸ್ಟೈನ್ ಮತ್ತು ದೇವರ ನಂಬಿಕೆ

ಐನ್ ಸ್ಟೈ ನ್ ಇಪ್ಪತ್ತನೇ ಶತಮಾನದ ಜಗತ್ತಿನ ಅತಿ ದೊಡ್ಡ ಭೌತಶಾಸ್ತ್ರಜ್ಞ. ಹಾಗೂ ಗಾಂದೀಜಿಯಂತೆಯೇ ಶಾಂತಿ ದೂತ. ಚಿಕ್ಕ ವಯಸ್ಸಿನಲ್ಲೇ ಸಾಪೇಕ್ಷ ಸಿದ್ಧಾಂತ, ಶಕ್ತಿ ಸಿದ್ಧಾಂತ ಮುಂತಾದ ವಿಷಯಗಳ ಮೇಲೆ ಅತಿ ಮಹತ್ವದ ಪ್ರಬಂಧಗಳನ್ನು ಬರೆದು ವಿಶ್ವದಾದ್ಯಂತ ಹೆಸರು ಗಳಿಸಿದ.  ಈ ವಿಜ್ಞಾನಿ ಆಗಾಗ ತನ್ನ ಮಾತಿನಲ್ಲಿ ದೇವರ ಹೆಸರು ತರುತ್ತಿದ್ದುದುಂಟು.  ಆದರೆ,  ಜನ ಸಾಮಾನ್ಯರು ಬಳಸುವ ಅರ್ಥದಲ್ಲಲ್ಲ. ದೈವ ವಿಶ್ವಾಸಿಯಲ್ಲದ ಐನ್ ಸ್ಟೈನ್ ಗೆ ದೇವರೆಂದರೆ ವಿಶ್ವದ ಮೊಲ ಹಾಗೂ ಏಕಮೇವ ವೈಜ್ಞಾನಿಕ ಸೂತ್ರಕ್ಕೆ ಪರ್ಯಾಯ  ಪದವಾಗಿತ್ತು, ತನ್ನ ಆಯಸ್ಸಿನ ಕೊನೆಯ ಸುಮಾರು ನಲವತ್ತು ವರ್ಷಗಳನ್ನು ಆತ ಈ ರಹಸ್ಯವನ್ನು ಬಿಡಿಸುವ ಪ್ರಯತ್ನದಲ್ಲಿ ಕಳೆದನೆನ್ನಬಹುದು.  ಈ ತನ್ನ ಶಂಶೋಧನಾ ವಿಷಯಕ್ಕೆ ಅವನು ಸಮೀಕೃತ ಕ್ಷೇತ್ರ ಸಿದ್ಧಾಂತ" (Unified field theory)  ಎಂದ ಹೆಸರು ಕೊಟ್ಟಿದ್ದ.

ಐನ್ ಸ್ಟೈ ನ್ ನಾಲ್ಕು ದಶಕಗಳ ಕಾಲ ಯತ್ನಿಸಿದರೂ ಸಮೀಕೃತ ಕ್ಷೇತ್ರ ಸಿದ್ಧಾಂತ ಒಂದು ಹಗಲುಗನಸಾಗಿಯೆ ಉಳಿಯಿತು.  ಮನುಷ್ಯರಿಂದ ತಿಳಿಯಲಾರದ ಸತ್ಯವಾಗಲಿ ಮೊಲ ಸೂತ್ರವಾಗಲಿ ಇದೆಯೆಂದಾದರೆ, ಅದು ಇದೆ ಎಂದು ಸಾಧಿಸುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೆ ಇಲ್ಲವೆಂದು ಸಾಧಿಸುವುದೂ ಕೂಡ ಅಸಾಧ್ಯ.  ಆದ್ದರಿಂದ, ಆ ಕುರಿತಾದ ಚರ್ಚೆಯೆ ಅರ್ಥಹೀನವಾಗುತ್ತದೆಎ.  ಆದರೆ, ಅ ಕುರಿತಾದ ಸಂಶೋಧನೆ ಅರ್ಥಹೀನವಾಗುವುದಿಲ್ಲ.

ಭೌತ ಜಗತ್ತಿನ ಹಿಂದೆ ಸಮೀಕೃತ ಸೂತ್ರವಿದೆಯೆಂಬ ನಂಜಿಕೆಯಾದರೂ ಏಕೆ?  ಕೆಲವು ವರ್ಷಗಳ ಹಿಂದೆ  ಇದು ಕೇಳಬಾರದ ಪ್ರಶ್ನೆ.  ಆದರೆ, ಈಗ ಹಾಗಲ್ಲ, ವೈರುಧ್ಯಗಳನ್ನು ಅನುಮಾನಗಳನ್ನು ಬಹಳತ್ವವನ್ನು ಒಪ್ಪಿಕೊಳ್ಳುವುದು ಇಂದು ಸಾಧ್ಯ.   ಆದ್ದರಿಂದ, ಅನೇಕ ಸೂತ್ರಗಳು ಕೆಲವೊಂದು ಪರಸ್ಪರ ವಿರುದ್ಧವಾದವು ಕೂಡಾ ಲೋಕದಲ್ಲಿ ಒಟ್ಟೊಟ್ಟಿಗೇ ಇರಬಾರದೇಕೇ ಎಂದು ನಾವು ಕೇಳಬಹುದು.

ಜಗತ್ತಿನ ಶಕ್ತಿಗಳೆಲ್ಲ ಸಾಂಗತ್ಯದಲ್ಲಿವೆ ಎಂಬ ನಂಬಿಕೆಯ ಹಿಂದೆ ಅವು ಹಾಗೆ ಇರಬೇಕು ಎಂಬ ಅಭಿಲಾಷೆಯೆ ಹೆಚ್ಚು ಕೆಲಸ ಮಾಡುವ ಹಾಗೆ ಕಾಣುತ್ತದೆ.

ದೇವರನ್ನು ಕಳಕೊಂಡ ಮನುಷ್ಯ ಈ ಶೂನ್ಯವನ್ನು ತುಂಬುವುದಕ್ಕೆ ಅದಕ್ಕೆ ಸರಿಸಮನಾದ ಇನ್ನೊಂದು ಉಪಸ್ಥಿತಿಯನ್ನು ಬಯಸುತ್ತಿರಬಹುದೇ...?

( ಕೆ.ವಿ.ತಿರುಮಲೇಶ್ ಅವರ ಲೇಖನದಿಂದ, ವಿಜಯ ಕರ್ನಾಟಕ-15-02-2008 )

Monday, April 14, 2008

ಮನುಷ್ಯರಿಗಿಂತ ದೇವರಲ್ಲಿ ಹೇಳಿಕೊಳ್ಳಬಹುದು...

ನಮ್ಮ ಕಷ್ಟ-ಸುಖ ದೇವರಲ್ಲಿ ಹೇಳಿಕೊಳ್ಳಬಹುದು. ಮನುಷ್ಯರಲ್ಲಿ ಹೇಳಿಕೊಳ್ಳೋದಿದೆಯಲ್ಲ; ಅದೂ ಕಷ್ಟವೇ ಸರಿ. ನಮ್ಮ ಸುಖ ನಾವು ಹೇಳಿಕೊಳ್ಳೋದು ಸರಿಕಾಣದು. ಕೇಳಿದರೆ ಪರವಾಗಿಲ್ಲ ಚೆನ್ನಾಗಿದ್ದೀವೆ ಎನ್ನುತ್ತೇವೆ. ನಾವು ಹೇಳಿಕೊಳ್ಳದಿದ್ದರೂ ಕಂಡು ಕರುಬುವವರಿಗೇನೂ ಕಡಿಮೆ ಇಲ್ಲ.  ಕಷ್ಟ ಅಂತೂ ಬಿಡಿ, ಹೇಳಿಕೊಂಡರೆ ಮೆಲ್ಲನೆ ಹಿಂದೆ ಸರಿವವರೇ ಇದಾರೆ.  ಹಾಗೇನಾದರೂ ಸಂಕಷ್ಟ ಕೇಳಿದರೆ ಆ ಸಂದರ್ಭದಲ್ಲಿ ಅವರೇ ದೇವರಾಗಿರುತ್ತಾರೆ;ಅಲ್ಲವೇ?  ಹೌದು, ಸರಿ ಸರಿಯಾಗಿ ಬದುಕುತ್ತಿದ್ದರೆ ಪರಿಪರಿಯಾದ ನೆಂಟರು! ಇಲ್ಲದಿದ್ದರೆ, ಇವನದೇನಪ್ಪ ಇದ್ದದ್ದೇ ಪಿರಿ ಪಿರಿ ಅನ್ತಾರೆ.
ಬಡವರ ಕಷ್ಟ ಅರ್ಥವಾಗುವಂಥ ಉಳ್ಳವರು ವಿರಳ. ಅದಕ್ಕೇ ಹೇಳೋದು "ಬಡವರ ಕಷ್ಟ ಭಗವಂತನಿಗೇ ಗೊತ್ತು" ಅಂತ.  ದುಷ್ಟರಿಗಂತೂ ಅರ್ಥವಾಗೋದೇ ಇಲ್ಲ ಬಿಡಿ. ಈ ಭಾರತ ದೇಶ ಬಡಬಗ್ಗರ ದೇಶ. ನಮ್ಮ ಬಡ ಜನತೆ ಭಗವಂತನಲ್ಲಿಟ್ಟಿರವ ನಂಬಿಕೆ ವಿಶ್ವಾಸ ವಿದೇಶೀಯರನ್ನೂ ಮೂಕ ವಿಸ್ಮಿತರನ್ನಾಗಿಸಿದೆ.
ನಮ್ಮ ಪುಢಾರಿಗಳಿಗಂತೂ ಬಡವರು ಬಡವರಾಗಿರಬೇಕು; ಬುದ್ಧಿಗೂ ಅವರಿಗೆ ದಾರಿದ್ರ್ಯವಿರಬೇಕು ಆಗಲೇ ಅವರ ಬೇಳೆ ಬೇಯೋದು ಎಂಬೋದು ಅವರ ಚುನಾವಣೆಯ ಕಾಲದಲ್ಲಿ ಗೊತ್ತಾಗದೇ ಇರದಲ್ಲ!  ಬರೇ ಬಡವರ ಕಣ್ಣೀರೊರೆಸುವ ನಾಟಕ! ಅದಕ್ಕೇ ಕರವಸ್ತ್ರ ಕೊಟ್ಟ ಹಾಗೆಯೇ ಒಂದಿಇಷ್ಟು ಹಾಕಿಯೊ ತಮ್ಮ ಸ್ವಾರ್ಥ ಸಾಧನೆ ಮಾಡ್ಕೋತಾರೆ ಇಂಥ "ದೊಡ್ಡ ಮನುಷ್ಯರು"  ಆದರೆ, ನಮ್ಮ ಬಡ ಜನತೆ ಈಗೀಗ ಬುದ್ಧಿವಂತರಾಗ್ತಿದಾರೆ. ಅವರಿಗೊತ್ತು ಇಂಥ ನಯವಂಚಕರಿಗೆಲ್ಲ ಚಳ್ಳೇ ಹಣ್ಣು ತಿನ್ಸೋದು ಹೇಗೆಂತ?
ಅಷ್ಟಕ್ಯೂ ಮನುಷ್ಯ ಕಷ್ಟಪಟ್ಟೇ ಜೀವನದಲ್ಲಿ ಮುಂದೆ ಬರಬೇಕೆಂದೂ ಹೇಳುತ್ತಾರೆ; ಈ ನಮ್ಮ ಜನ. ಅಂಥ ಕಷ್ಟ ಸಹಿಷ್ಣುಗಳು!  ಜೊತೆಗೆ ಭಗವಂತನಲ್ಲಿ ನಂಬಿಕೆ ಇರಬೇಕು ಅಂತಾರೆ. ಅವನಲ್ಲಿ ನಂಬಿಕೆ ಇಟ್ಟು ಆಶ್ಚರ್ಯಕರ ರೀತಿಯಲ್ಲಿ ತಮ್ಮ ಸಂಕಟಗಳಿಂದ ಪಾರಾದವರಿದ್ದಾರೆ. ಅಂಥ ನಿಶ್ಚಲ ನಂಬಿಕೆಯಿಂದಲೇ ಈ ಭವದ ಬದುಕು ನಡೆಯುವುದೂ ಕೂಡ. ಇಲ್ಲವಾದರೆ, ಈ ಪಾಟಿ ಜನಸಂಖ್ಯೆ ಹೆಚ್ಚುತ್ತಿರಲಿಲ್ಲ. ಯಾಕಂದರೆ, ಎಂಥ ಕೆಟ್ಟ ಕಾಯಿಲೆ ಬಂದ್ರೂ (ಕಾಯಿಲೆಯಂಥ ಮಹಾ ಶತ್ರು ಬೇರೇನಿಲ್ಲ) ಬದುಕುವ ಛಲ ಬಿಡದೇ ಎಲ್ಲಿಂದಲಾದ್ರೂ ದುಡ್ಡು ಹೊಂದಿಸಿ ನರ್ಸಿಂಗ್ ಹೋಂಗಳಿಗೂ ದುಡ್ಡು ಸುರಿಯೋ ಬಡವರು ಇರುತ್ತಿರಲಿಲ್ಲ; ಖಂಡಿತ ಬದುಕುವುದಕ್ಕೇ ಇಷ್ಟಪಡುತ್ತಿರಲಿಲ್ಲ.
ಅದಕ್ಕೇ ಹೇಳ್ತಾರೆ: ಭಗವಂತನಲ್ಲಿ ನಂಬಿಕೆ ಇರಬೇಕು. ಅವನ ದಯೆಯೊಂದಿದ್ದರೆ ಸಾಕು, ಯಾರಾದರೂ ಪುಣ್ಯಾತ್ಮರು ಸಹಾಯಕ್ಕೆ ಬಂದೇ ಬರ್ತಾರೆ ಎಂಬುದೇ ಅಚಲ ನಂಬಿಕೆ. ಹಣದಿಂದಲೇ ಎಲ್ಲವೂ ಆಗೋದಿಲ್ಲ ಎಂಬ ಅನುಭವ ಉಳ್ಳವರಿಗೂ ಉಂಟಲ್ಲ!  
ಮನುಷ್ಯ ಕಷ್ಟಪಟ್ಟೇ ಮುಂದೆ ಬರಬೇಕೆಂದೂ ಹೇಳುತ್ತಾರೆ. ಇಲ್ಲ ಕಷ್ಟಾಂದ್ರೇ ಏನೂಂತ ಸುತ್ತಮುತ್ತ ನೋಡಿಯಾದರೂ ತಿಳಕೊಂಡಿರಬೇಕು. ಆಗ ಮಾತ್ರ ನರ ಹರನಾಗಲು ಸಾಧ್ಯವಾದೀತು. ಆತನಿಗೆ ನೆರವಾಗಲು ಮನಸ್ಸಾದೀತು!
ಯಾವ ಮಹತ್ಕಾರ್ಯವೂ ಹೃದಯವನ್ನೇ ತೆರೆದಿಡದೇ, ಕಿಂಚಿತ್ ತ್ಯಾಗವಿಲ್ಲದೇನೆ ಆಗಲಾರದು. ಯಾವಾಗಲೂ ನೈಜ ಸಾಧಕರ ಹಿಂದೆ ಕಷ್ಟಗಳ ಪರಂಪರೆಯೇ.  ಅದನ್ನೆಲ್ಲ ದಾಟಿಯೇ ತಮ್ಮ ಅನುಭವದ ತೇಜಿಯಲ್ಲಿ ಅನುಭಾವದ ಮೊಟೆ ಹೊತ್ತೇ ಬಂದಿರುತ್ತಾರವರು. ಅವರ ಅಸ್ಖಲಿತ ನುಡಿಗಳು, ಅಚಲ ವಿಶ್ವಾಸಗಳು ಎಂದಿಗೂ ತೇಜೋಮಯ. ಅವನ್ನು ಅಳಿಸಿಬಿಡುವೆವೆಂದು ದುಷ್ಟಶಕ್ತಿಗಳು ಯತ್ನಿಸಿದರೂ ಅವೆಂದಿಗೂ ದೈವಿಕವಾಗಿ ವಿಝ್ರಂಭಿಸಿಯೆ ತೀರುವುವು. ಇಲ್ಲದಿದ್ದರೆ ಮತ್ತೊಂದು ಬೆಳಗಿನೆಡೆಗೆ ಮನುಷ್ಯನ ಆಶಯ ಮತ್ತು ಆಸಕ್ತಿಗಳು ಇರುತ್ತಲೇ ಇರಲಿಲ್ಲ!

Saturday, April 12, 2008

ದೇವರಿಂದ ಪಡೆಯುವುದೆಂದರೆ...?

ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ದೇವರಿಂದ ಪಡೆಯ ಬೇಕೆಂದೇ ಪೂಜೆ ಪುನಸ್ಕಾರಗಳನ್ನು ಮಾಡುವವರೂ ತತ್ ಕ್ಷಣ ಏನೊಂದನ್ನೂ ಸ್ಪಷ್ಟವಾಗಿ ಹೇಳಲಾರರು. ನಮ್ಮ ನಮ್ಮ ನಂಬಿಕೆ ಎಂದಾರಷ್ಟೇ.
ಪಂಚಭೂತಗಳಿಂದ ಸೃಷ್ಟಿಯಾದ ಈ ದೇಹ ಆ ದೇವರ ಕೊಡುಗೆ. ಬಂದದ್ದು ಬೆತ್ತಲೆ. ಉಟ್ಟದ್ದು ಭವದ ಬಟ್ಟೆ. ಬಿಟ್ಟು ಹೋಗುವಾಗ ತಟ್ಟನೆ ಕಣ್ಣಿಗೆ ಕಾಣದ ಅರಿವಿಗೆ ಬಾರದ ಕತ್ತಲೆ! ಬರಿ ಮೈ ತಣ್ಣಗೆ ಉರಿದು ಹೋದ ಮೇಲೆ ಮತ್ತದೆ ಪಂಚಭೂತಗಳಲ್ಲಿ ಲೀನ. ಈ ಜೀವ ಕೊಂಡು ಹೋಗುವುದೇನು? ಕತ್ತಲೆಯಿಂದ ಆ ಬೆಳಕಿನೆಡೆಗೆ? ಪೂರ್ಣತ್ವದಿಂದ ಪರಿಪೂರ್ಣದೆಡೆಗೆ. ನಶ್ವರತೆಯಿಂದ ಅಮರತ್ವದೆಡೆಗೆ...
ಈ ಭೌತಿಕ ಶರೀರದಲ್ಲಿ ಪಡೆದದ್ದೆಲ್ಲವೂ ಪೂರ್ವಾರ್ಜಿತವೆಂಬ ನಂಬಿಕೆ. ಸುಖಭೋಗಗಳು ಪುರುಷಾರ್ಥವೆಂಬುದು ವಾಡಿಕೆ.   ಆದರೆ,ಪರಾರ್ಥ ಇಲ್ಲದ ಸಾಧಕ-ಬಾಧಕಗಳು ಪೌರುಷೇಯವಾಗಲಾರವು. ಹಾಗೆ ಆಗುವುದಿದ್ದರೆ, ಬಲಾಢ್ಯರಾದವರೆಲ್ಲ ಅಂದರೆ, ಹಣವಂತರೂ ಸಹ ತಾವು ಬಯಸಿದ್ದೆಲ್ಲವನ್ನೂ ಪಡೆಯುತ್ತಿದ್ದರು. ಜೀವನ ಪರ್ಯಂತ ನೋವು ನಷ್ಟಗಳಿಲ್ಲದೇ, ದೇವರಿಗೆ ಕೈ ಮುಗಿಯದೇನೆ ಸುಖಿಗಳಾಗಿಯೆ ಕಳೆಯುತ್ತಿದ್ದರು. ಯಾವ ಕಾರಣಕ್ಕೂ ಕಣ್ಣೀರು ತುಂಬಿ ಬರುತ್ತಿರಲಿಲ್ಲ; ಅವರ ಕೆನ್ನೆಯ ಮೇಲೆ ಇಳಿಯುತ್ತಿರಲಿಲ್ಲ. ದಯೆಯೇ ನ್ಯಾಯದ ಊರುಗೋಲಾಗುತ್ತಿರಲಿಲ್ಲ. ದೇವರಲ್ಲಿ ನಂಬಿಕೆ ಎಂಬುದೇ ಉಳಿಯುತ್ತಿರಲಿಲ್ಲ. ದೀನ ದಲಿತರಿಗೆ ಅಲ್ಪ ಸ್ವಲ್ಪ ಕೊಡುವ ಮನಸ್ಸೂ ಇರುತ್ತಿರಲಿಲ್ಲ. ಸಮಾಜ ಸುಧಾರಣೆ ಎಂಬ ಸೊಲ್ಲೂ ಕೇಳುತ್ತಿರಲಿಲ್ಲ. ಪ್ರಪಂಚದೆಲ್ಲೆಡೆ ಸರ್ವಾಧಿಕಾರವೇ ವಿಜೃಂಭಿಸಿರುತ್ತಿತ್ತು.
ಅಪ್ರಾಪ್ತ ಪ್ರಾಸ್ಯಂ ಯೋಗಃ
ಪ್ರಾಪ್ತಸ್ಯ ಸಂರಕ್ಷಣಂ ಕ್ಷೇಮಃ
ಪೆಡಯದ್ದನ್ನು ಪಡೆಯುವುದು ಯೋಗ. ಮತ್ತು ಪಡೆದುದನ್ನು ರಕ್ಷಿಸುವುದು ಕ್ಷೇಮ. ಯೋಗ ಎಲ್ಲ ತತ್ವ ಜ್ಞಾನಗಳ ಮೂಲ. ಮಾನವನ ಮಾನಸಿಕ ಸ್ಥಿರತೆಗೆ ಸಾಧನ. ಅವನ ಎಲ್ಲ ನೋವುಗಳಿಗೆ ಅಂತ್ಯ. ಯೋಗ ಸಾಧನೆ ಮಾಡುವುದರಿಂದ ಸಿದ್ಧಿ, ಸ್ಥಿತ ಪ್ರಜ್ಞೆ. ಯೋಗಾಯೋಗ ಒದಗಿ ಬರುವುದೂ ನೈಪುಣ್ಯತೆ ಮಾತ್ರದಿಂದಲ್ಲ; ದೈವಿಕತೆಯ ಮಹತ್ವದಿಂದ.  ಪಡೆದದ್ದೆಷ್ಟೆಂದು ಕೇಳಿದರೆ, ನಿಜಕ್ಕೂ ಸಾತ್ವಿಕವೆನಿಸುವ ಮಾರ್ಗದಲ್ಲಿ ಮತ್ತು ಯೋಗ ಸಾಧನೆಯಿಂದ ಪಡೆದದ್ದಷ್ಟೇ.  ಅದೇ ಬದುಕಿನ ಭಾಗ್ಯ ಪುರುಷ ಪುರುಷೋತ್ತಮ ನಾಗುವುದು, ಸ್ತ್ರೀ ದೇವತೆಯೆನಿಸುವುದು ಪಾರಮಾರ್ಥಿಕ ಚಿಂತನೆಯ ತಳಹದಿಯಿಂದಲೇ; ಯೋಗ ಸಿದ್ದಿಯ ಬಲದಿಂದಲೇ.
ಪಡೆಯುವುದೆಂದರೆ ಹೀಗೆ. ಇನ್ನು ಮರಳಿಸುವುದೆಂದರೆ ಹೇಗೆ?
ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವರಂತೆ ಕಾಣಿರೊ
ಹರಿಯ ಕರುಣದೊಳಾದ ಭಾಗ್ಯವ
ಹರಿ ಸಮರ್ಪಣೆ ಮಾಡಿ ಬದುಕಿರೋ
-ಎಂದರು ಪುರಂದರ ದಾಸರು.
ಈ ನೆಲದ ಋಣ. ಜಲದ ಋಣ ಮತ್ತು ಮಾತಾ ಪಿತೃಗಳ ಋಣ ಮರಳಿಸುವ ಮನಸ್ಸು ಈ ಕಾಲದಲ್ಲಿ ಎಲ್ಲರಿಗೂ ಬರುವುದುಂಟೇ...? ಬದುಕಲು ಕಿಂಚಿತ್ ಸ್ವಾರ್ಥ ಬೇಕು ನಿಜ. ಆದರೆ, ಧನ, ಕೀರ್ತಿ ಶನಿ ಪದೋನ್ನತಿ ಹಾಗೂ ಅಧಿಕಾರ ಲಾಲಸೆಗಳು ಹಾಗೆ ಮಾಡಗೊಡುತ್ತವೆಯೆ..